ಯಕ್ಷಯಕ್ಷಿಯರು -
ಹಿಂದೂ ಧಾರ್ಮಿಕ ಪುರಾಣ ಕಲ್ಪನೆಯ ಪ್ರಕಾರ ಯಕ್ಷಯಕ್ಷಿಯರು ದೇವತೆಗಳಲ್ಲಿಯೇ ಒಂದು ಪಂಗಡ. ಆದರೆ ಇವರಿಗೆ ಯಾವುದೇ ಪೂಜೆ ಪುರಸ್ಕಾರವಿಲ್ಲ. ಯಕ್ಷಲೋಕ, ಯಕ್ಷಪ್ರಶ್ನೆ ಎಂಬ ನುಡಿಗಳು ಕನ್ನಡದಲ್ಲಿ ಬಳಕೆಯಲ್ಲಿದೆ. ಯಕ್ಷಲೋಕವೆಂದರೆ ಅದೊಂದು ಅವಾಸ್ತವ ಕಲ್ಪನಾಲೋಕ. ಬಿಡಿಸಲಾಗದ, ಸಂದಿಗ್ಧರೂಪದ ಪ್ರಶ್ನೆಗಳನ್ನು ಯಕ್ಷಪ್ರಶ್ನೆ ಎಂಬ ಮಾತಿನಿಂದ ಕರೆಯಲಾಗುತ್ತದೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಅವರನ್ನು ಪರೀಕ್ಷಿಸುವ ನೆಪದಿಂದ ಯಮ ಯಕ್ಷ ರೂಪತಾಳಿ ಕೆಲವು ಪ್ರಶ್ನೆಗಳನ್ನು ಕೇಳಿದ ಆಖ್ಯಾನ ಮಹಾಭಾರತದಲ್ಲಿ ಪ್ರಸಿದ್ಧವಾಗಿದೆ.

	ಜೈನರಲ್ಲಿ ಯಕ್ಷಯಕ್ಷಿಯರಿಗೆ ವಿಶೇಷವಾದ ಸ್ಥಾನವಿದೆ. ಹೊರನೋಟಕ್ಕೆ ತೀರ್ಥಂಕರ ವಿಗ್ರಹಗಳು ವ್ಯತ್ಯಾಸಗಳಿಲ್ಲದೆ ಒಂದೇ ಎರಕದ ಮೂರ್ತಿಗಳಂತೆ ಕಾಣುತ್ತವೆ. ಆದರೆ ತೀರ್ಥಂಕರರನ್ನು ಗುರುತಿಸುವ ಅನೇಕ ಕ್ರಮಗಳಿವೆ. ಒಬ್ಬ ತೀರ್ಥಂಕರನಿಗೂ ಇನ್ನೊಬ್ಬ ತೀರ್ಥಂಕರನಿಗೂ ಕೆಲವು ಅಂಶಗಳಲ್ಲಿ ವ್ಯತ್ಯಾಸಗಳಿರುತ್ತವೆ. ಅವುಗಳಲ್ಲಿ ಪ್ರಮುಖವಾದವು - ಲಾಂಛನ, ಎತ್ತರ, ಬಣ್ಣ, ಮತ್ತು ಯಕ್ಷಯಕ್ಷಿಯರು. ಒಬ್ಬೊಬ್ಬ ತೀರ್ಥಂಕರನಿಗೂ ಮೂರ್ತಿಯ ಬಲಭಾಗದಲ್ಲಿ ಯಕ್ಷನೂ ಎಡಭಾಗದಲ್ಲಿ ಯಕ್ಷಿಯೂ ಇರುತ್ತಾರೆ. ಯಕ್ಷ ಯಕ್ಷಿಯರನ್ನು ಶಾಸನ ದೇವತೆಗಳೆಂದೂ ಕರೆಯಲಾಗುತ್ತದೆ.

	ಕನ್ನಡ ಜೈನಪುರಾಣಗಳಲ್ಲಿ ಯಕ್ಷಯಕ್ಷಿಯರ ಸ್ತೋತ್ರಪದ್ಯಗಳಿವೆ. ಜೈನ ಪುರಾಣಗಳಲ್ಲೂ ಇದರ ಸಂಬಂಧವಾದ ಕಥೆಗಳು ಬರುತ್ತವೆ. ಮಹಾಪುರಾಣ, ಪ್ರತಿಷ್ಠಾ ತಿಲಕಗಳಲ್ಲಿ ಇದರ ಪ್ರಸ್ತಾಪವಿದೆ. ಇವರು ಪುರಾಣಾದಿಗಳಲ್ಲಿ ಸ್ಥಾನ ಪಡೆದಿದ್ದು, ಜೈನ ಧರ್ಮವನ್ನು ಪ್ರವೇಶಿಸಿದ್ದು ಜೈನ ಧರ್ಮದ ಇತಿಹಾಸಾರಂಭ ಕಾಲದಲ್ಲಿ ಅಲ್ಲವೆಂದೂ ಪೂಜಾದಿ ಬಾಹ್ಯ ಆಚಾರಗಳು ಆರಂಭವಾದ ಘಟ್ಟದಲ್ಲಿರಬೇಕೆಂದೂ ತಿಳಿಯಲು ಅವಕಾಶವಿದೆ. ಇಂದಿಗೂ ಇವರಿಗೆ ಪ್ರತ್ಯೇಕವಾದ ಪೂಜಾಮಂದಿರಗಳೂ ಪೂಜಾವ್ಯವಸ್ಥೆಯೂ ದಕ್ಷಿಣದಲ್ಲಿರುವಷ್ಟು ಉತ್ತರದಲ್ಲಿಲ್ಲ. ಮೂರ್ತಿ ನಿರ್ಮಾಣದ ದೃಷ್ಟಿಯಿಂದಲೂ ಯಕ್ಷಯಕ್ಷಿಯರ ವಿಗ್ರಹಗಳು ದಕ್ಷಿಣದಲ್ಲೇ ಅಧಿಕ. ಉತ್ತರದಲ್ಲಿ ಇವರ ಮೂರ್ತಿಗಳನ್ನೂ ಕೆತ್ತಿಸುವ ವಿಧಾನ ವಿರಳ.

	ಒಟ್ಟು 24 ಜನ ಯಕ್ಷರೂ 24 ಜನ ಯಕ್ಷಿಯರೂ ಇದ್ದಾರೆ. 24 ಜನ ಯಕ್ಷರು : ಗೋಮುಖ, ಮಹಾಯಕ್ಷ, ತ್ರಿಮುಖ, ಯಕ್ಷೇಶ್ವರ, ತುಂಬುರು, ಕುಸುಮ, ವರನಂದಿ, ವಿಜಯ, ಅಜಿತ, ಬ್ರಹ್ಮ, ಈಶ್ವರ, ಕುಮಾರ, ಷಣ್ಗುಗ , ಪಾತಾಳ, ಕಿನ್ನರ, ಗರುಡ, ಗಂಧರ್ವ, ಮಹೇಂದ್ರ, ಕುಬೇರ, ಪುರುಷವರ, ವಿದ್ಯುತ್ಪ್ರಭ, ಸರ್ವಾಹ್ಣ, ಧರಣೇಂದ್ರ ಮತ್ತು ಮಾತಂಗ.

	24 ಜನ ಯಕ್ಷಿಯರು : ಚಕ್ರೇಶ್ವರಿ, ರೋಹಿಣಿ, ಪ್ರ ಜ್ಞ ಪ್ತಿ, ವಜ್ರಶೃಂಖಲಾ, ಪುರುಷದತ್ತಾ, ಮಾನೋವೇಗೆ, ಕಾಳಿ, ಜ್ವಾಲಾಮಾಲಿನಿ, ಮಹಾಕಾಳಿ, ಮಾನವಿ, ಗೌರಿ, ಗಾಂಧಾರಿ, ವೈರೋಚಿ, ಅನಂತಮತಿ, ಮಾವಸಿ, ಮಹಾಮಾನಸಿ, ಜಯಾ ವಿಜಯಾ, ಅಪರಾಜಿತಾ, ಬಹು ರೂಪಿಣಿ, ಚಾಮುಂಡಿ, ಕೂಷ್ಮಾಂಡಿ, ಪದ್ಮಾವತಿ ಮತ್ತು ಸಿದ್ಧಾಯಿನಿ.

	ದಿಗಂಬರ ಮತ್ತು ಶ್ವೇತಾಂಬರ ಜೈನ ಧರ್ಮದ ಎರಡು ಮುಖ್ಯ ಸಂಪ್ರದಾಯಗಳು. ದಿಗಂಬರ ಅಮ್ನಾಯದಂತೆ ಮೋಕ್ಷ ಪ್ರಾಪ್ತಿ ಪುರುಷ ದೇಹಧಾರಿ ಜೀವಕ್ಕೆ ಮಾತ್ರ. ಅದರಿಂದಾಗಿ ಪೂಜೆ, ಪುರಸ್ಕಾರಗಳು ಕೂಡ ಪುರುಷ ದೈವಗಳಿಗೇ ಹೆಚ್ಚು. ಚೈತ್ಯಾಲಯಗಳಲ್ಲಿ ತೀರ್ಥಂಕರರಿಗೇ ಮೊದಲ ಪೂಜೆ. ಆದರೆ ಕಾಲಾಂತರದಲ್ಲಿ ಅವರ ಜೊತೆಗೆ ಉಳಿದ ಶಕ್ತಿಗಳಿಗೂ ಪೂಜೆ ಸಲ್ಲತೊಡಗಿತು. ಗೌಣ ದೇವತೆಗಳೆಂದು ಪರಿಗಣಿತವಾಗಿದ್ದ ಯಕ್ಷಯಕ್ಷಿಯರೂ ಪ್ರತ್ಯೇಕ ಪೂಜೆ ಪಡೆಯುವಂತಾಯಿತು. ಈ ಕ್ರಮ ವ್ಯಾಪಕವಾಗಿ ಮುಂದುವರಿಯಿತು. ಮೂಲದಲ್ಲಿ ಯಕ್ಷಿ ಆರಾಧನೆಯ ರೂಪದಲ್ಲಿ ಪ್ರಾರಂಭವಾದ ಈ ಪೂಜಾ ಸಂಪ್ರದಾಯ ತಾಂತ್ರಿಕ ಆರಾಧನೆಯಾಗಿ ಪರಿಣಮಿಸಿತು. ತತ್ಫಲವಾಗಿ ಕೆಲವು ಜೈನ ಗುರುಗಳು ಈ ಪೂಜಾ ಪದ್ಧತಿಯನ್ನು ಪುರಸ್ಕರಿಸಿದರು. ಅವರಲ್ಲಿ ಹಲವರು ಮಂತ್ರ, ತಂತ್ರ, ನೈಪುಣ್ಯ ಸಂಪಾದಿಸಿದರು. 11ನೆಯ ಶತಮಾನದಲ್ಲಿದ್ದ ಮಲ್ಲಿಷೇಣಸೂರಿ ಎಂಬ ಜೈನ ಮುನಿ ಹೆಸರಾಂತ ತಾಂತ್ರಿಕಾರಾಧಕನಾಗಿದ್ದ. ಈತ ಜ್ವಾಲಿನೀ ಕ್ಲಪ, ಭೈರವ, ಪದ್ಮಾವತೀ ಕಲ್ಪ ಎಂಬ ಕೃತಿಗಳನ್ನು ಬರೆದಿದ್ದಾನೆ.

	ಕನ್ನಡನಾಡಿನಲ್ಲಿ ಯಕ್ಷಿ ಆರಾಧನೆ ವಿಶೇಷವಾಗಿ ಕಂಡುಬಂದರೂ ಎಲ್ಲ ಯಕ್ಷ ಯಕ್ಷಿಯರಿಗೂ ಸಮಾನಪೂಜೆ, ಪ್ರಸಿದ್ಧಿ ದೊರೆಯಲಿಲ್ಲ. ಪದ್ಮಾವತಿ, ಜ್ವಾಲಾ ಮಾಲಿನಿ ಈ ಇಬ್ಬರು ಯಕ್ಷಿಯರಿಗೆ ಮಾತ್ರ ವಿಶೇಷ ಮಾನ್ಯತೆ ದೊರೆತಿದೆ. ಇವರನ್ನು ಗೌರವಪೂರ್ವಕವಾಗಿ ಅಮ್ಮನವರು ಎಂದೂ ಸಂಭೋದಿಸಲಾಗುತ್ತದೆ. ಪದ್ಮಾವತಿ 23ನೆಯ ತೀರ್ಥಂಕರನಾದ ಪಾಶ್ರ್ವನಾಥ ತೀರ್ಥಂಕರನ ಯಕ್ಷಿ : ಜ್ವಾಲಾಮಾಲಿನಿ 8ನೆಯ ತೀರ್ಥಂಕರನಾದ ಚಂದ್ರಪ್ರಭ ತೀರ್ಥಂಕರನ ಯಕ್ಷಿ; ಜ್ವಾಲಾಮಾಲಿನಿ ಯಕ್ಷಿಯ ದೇವಸ್ಥಾನಗಳು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆ, ಚಿಕ್ಕಮಗಳೂರು ಜಿಲ್ಲೆಯ ಎಡೆಹಳ್ಳಿ ಮತ್ತು ನರಸಿಂಹರಾಜಪುರ (ಸಿಂಹನಗದ್ದೆ) ಮೊದಲಾದ ಕಡೆಗಳಲ್ಲಿದೆ. ಪದ್ಮಾವತಿ ಯಕ್ಷಿಯ ದೇವಸ್ಥಾನಗಳಲ್ಲಿ ಶಿವಮೊಗ್ಗದಲ್ಲಿಯ ಹೊಂಬುಜ (ಹುಮಚ) ಕ್ಷೇತ್ರದಲ್ಲಿರುವುದು ವಿಖ್ಯಾತವಾಗಿದೆ. ಈಕೆ ಏಳು ನೂರು ವರ್ಷಗಳ ಹಿಂದೆ ಹೊಂಬುಜ ಕ್ಷೇತ್ರದ ಅಧಿ ದೇವತೆಯೂ ಅಲ್ಲಿ ಹಿಂದೆ ಆಳಿದ ಸಾಮಂತ ವಂಶದವರ ಕುಲದೇವತೆಯೂ ಆಗಿದ್ದಳು. ಈಕೆಗೆ ಹರಕೆ ಹೊತ್ತು ನನ್ನಿಗಂಗನೆಂಬ ಅರಸ ಹಾಗೂ ಅವನ ಅರಸಿ ಕಂಚಲ ಮಹಾದೇವಿಯು ಹೆಮ್ಮಾಡಿದೇವ ಎಂಬ ಮಗನನ್ನು ಪಡೆದರೆಂದು ಶಾಸನ ದಾಖಲೆಯಿದೆ. ಕೆಲವು ಕನ್ನಡ ಓಲೆಗರಿ ಗ್ರಂಥಗಳ ಪ್ರಾರಂಭದಲ್ಲಿ ಪದ್ಮಾವತಿ ದೇವಿಯ ಸ್ತುತಿಯಿದೆ. ಸ್ರವಣಬೆಳಗೊಳದಲ್ಲಿ ಅಧಿದೇವತೆಯಾಗಿ ಕೂಷ್ಮಾಂಡಿನಿ ದೇವಿ ಎಂಬ ಯಕ್ಷಿ ಸಿದ್ಧಸಿಂಹಾಸನಾಧೀಶ್ವರಿ ಎಂದು ಪ್ರಖ್ಯಾತಳಾಗಿದ್ದಾಳೆ. ಶ್ರವಣಬೆಳಗೊಳ ಮತ್ತು ಸಮೀಪದ ಸ್ಥಳಗಳಲ್ಲಿ ಕೂಷ್ಮಾಂಡಿನಿಯ ಸುಂದರವಾದ ಹತ್ತಾರು ವಿಗ್ರಹಗಳಿವೆ. 

	ಹಾಸನ ಜಿಲ್ಲೆಯ ಮರ್ಕೂಲಿ ಎಂಬ ಹಳ್ಳಿಯಲ್ಲಿ ಅಪೂರ್ವ ಕಲಾಸಂಪತ್ತಿನಿಂದ ಕಂಗೊಳಿಸುವ ಗೋಮುಖ ಯಕ್ಷ ಹಾಗೂ ಚಕ್ರೇಶ್ವರಿ ಯಕ್ಷಿಯ ವಿಗ್ರಹಗಳಿರುವ ಪಂಚಬಸದಿಯಿದೆ. ಹದಿನಾರು ಹಸ್ತಗಳನ್ನೊಳಗೊಂಡ, ಶಿಲ್ಪಕಲಾ ಪರಿಪೂರ್ಣತೆಯಿಂದ ಶೋಭಿಸುವ ಯಕ್ಷರಿರುವ ಈ ಬಸದಿಯನ್ನು ಹೊಯ್ಸಳ ವಿಷ್ಣುವರ್ಧನನ ಪಟ್ಟಮಹಿಷಿ ಶಾಂತಲಾದೇವಿ ನಿರ್ಮಿಸಿದಳೆಂದು ಅಲ್ಲಿಯ ಶಾಸನಗಳಿಂದ ತಿಳಿದುಬರುತ್ತದೆ. ಜೈನ ಧರ್ಮದಲ್ಲಿ ಕುಲದೇವತೆ ಇಲ್ಲವೇ ಮಂತ್ರ ತಂತ್ರ ಸಿದ್ಧಿ ಉಪಾಸನೆಗಳಿಗೆ ಪುರಸ್ಕರವಿಲ್ಲ. ಆದರೂ ಯಕ್ಷಯಕ್ಷಿಯರ ಪೂಜೆ ಒಂದು ರೀತಿಯಲ್ಲಿ ಮಾತೃಪೂಜೆಯೂ ಆಗಿದ್ದುದರಿಂದ ಸಹಜವಾಗಿಯೇ ಮಂತ್ರ ವಿದ್ಯೆಗೆ ಎಡೆಗೊಟ್ಟಿತು. ಅರ್ಕಕೀರ್ತಿ ಎಂಬ ಜೈನ ಯತಿ ವಿಮಲಾದಿತ್ಯನೆಂಬ ದೊರೆಗೆ ಒದಗಿದ್ದ ಶನಿ ಸಂಕಟವನ್ನು ಈ ಮೂಲಕ ನಿವಾರಿಸಿದನೆಂದು ಒಂದು ಆಧಾರ ತಿಳಿಸುತ್ತದೆ. ಇದೇ ರೀತಿ ಇನ್ನೂ ಕೆಲವು ಜೈನ ಯತಿಗಳು ಮಂತ್ರ ಸಿದ್ಧಿ ಪಡೆದು ಪ್ರಸಿದ್ಧರಾದ ವಿಚಾರ ಶಾಸನಾದಿಗಳಿಂದ ತಿಳಿದುಬರುತ್ತದೆ. ಜಿನಚಂದ್ರದೇವನೆಂಬ ಗುರು ಮಹಾಮಂತ್ರವಾದಿಯಾಗಿದ್ದನಂತೆ. ಆತನ ಮುಂದೆ ಭೂತ ಪ್ರೇತ ಪಿಶಾಚಾದಿಗಳ ಆಟ ಏನೂ ನಡೆಯುತ್ತಿರಲಿಲ್ಲವೆಂದೂ ಉಲ್ಲೇಖವಿದೆ. ಕೆಲವು ರಾಜಮನೆತನಗಳಿಗೆ ಭೈರವ, ಕಾಳಿಕಾದೇವಿ ಕುಲದೇವತೆಗಳಾಗಿದ್ದರು. 

	ಯಕ್ಷಯಕ್ಷಿಯರಿಗೆ ಭಕ್ತರು ಸಲ್ಲಿಸಿದ ಪೂಜೆಗೆ ತಕ್ಕ ಪ್ರತಿಫಲ ದೊರೆಯುತ್ತದೆಂಬ ನಂಬಿಕೆ ಜೈನ ಧರ್ಮಿಯರಲ್ಲಿದೆ. ಜೈನೇತರರಲ್ಲೂ ಈ ಬಗೆಯ ಪೂಜೆಗಳುಂಟು. ಶಕ್ತಿ ದೇವತೆಗಳ ಪೂಜಾ ವಿಧಾನಕ್ಕೆ ಯಕ್ಷಿಯರ ಪೂಜೆಯೂ ಸೇರುತ್ತದೆ., ಬೌದ್ಧರಲ್ಲಿ ತಾರಾದೇವಿ (ತಾರಾಭಗವತಿ), ಹಿಂದುಗಳಲ್ಲಿ ಗೌರಿ ಜನ ಪ್ರಿಯವಾಗಿರುವಂತೆ ಜೈನರಲ್ಲಿ ಪದ್ಮಾವತಿಯಕ್ಷಿ ಬಹು ಮನ್ನಣೆಗೆ ಪಾತ್ರಳಾದ ದೇವತೆ, ಕೆಲವು ಸಂಶೋಧಕರು ತರಾ, ಪದ್ಮಾವತಿ ಮತ್ತು ಗೌರಿ ಈ ಮೂವರ ಸ್ವರೂಪವೂ ಒಂದೇ ಎಂದು ಅಭಿಪ್ರಾಯಪಡುತ್ತಾರೆ.
										
(ಎಚ್. ಪಿ. ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ